ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಈ ದಂಪತಿಗಳು ಮಹಾರಾಷ್ಟ್ರದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ ಮನ:ಪರಿವರ್ತನೆಗೊಂಡು, 'ಉರಿಲಿಂಗ ದೇವರೆಂಬ' ಗುರುವಿನಿಂದ ಗುರುದೀಕ್ಷೆ ಪಡೆದು ಶರಣನಾಗುವನು. ಇದರಿಂದ ಸಂತಸಗೊಂಡ ಕಾಳವ್ವೆ ತಾನೂ ಪತಿಯ ಹಾದಿಯಲ್ಲೆ ಮುನ್ನಡೆದಳು. ಈಕೆಯ ವಚನಗಳ ಅಂಕಿತ "ಉರಿಲಿಂಗಪೆದ್ದಿಗಳರಸ". == ವಚನಗಳ ವೈಶಿಷ್ಟ್ಯ == ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಭೂಸುರರು ಕ್ರಮವಾಗಿ ಆನೆ, ಮಹಿಷ, ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಲಿಯುಗದಲ್ಲಿ ಹೋತನನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಾಳವ್ವೆ ತನ್ನ ವಚನವೊಂದರಲ್ಲಿ ತಿಳಿಸುತ್ತಾ, ಮನುಷ್ಯ ಸೇವಿಸುವ ಆಹಾರದ ಮೇಲೆ ಜಾತಿಗಳನ್ನು ವಿಂಗಡಿಸುವುದನ್ನು ಖಂಡಿಸಿದ್ದಾಳೆ. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು, ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ೧೨ ವಚನಗಳು ಲಭ್ಯವಾಗಿವೆ.